ಕಾಂಗ್ರೆಸ್ ಸಂದೇಶ

 ಭಾರತ ರಾಷ್ಟ್ರೀಯ ಕಾಂಗ್ರೆಸಿನ ಧ್ಯೇಯ ಧೋರಣೆಗಳನ್ನು ಜನತೆಗೂ, ಮುಖ್ಯವಾಗಿ ಕಾಂಗ್ರೆಸ್ ಸದಸ್ಯರಿಗೂ ತಿಳಿಯ ಹೇಳುವ ದೃಷ್ಟಿಯಿಂದ 1960ರಲ್ಲಿ ಮಾಸಿಕವಾಗಿ ಆರಂಭವಾಗಿ ಅನಂತರ ಸಾಪ್ತಾಹಿಕವಾಗಿ ಪರಿವರ್ತನೆಗೊಂಡ ಪತ್ರಿಕೆ. ರಾಜಕೀಯ ಸಂಸ್ಥೆಯ ಪತ್ರಿಕೆಯಾದ್ದರಿಂದ ಆರಂಭದಿಂದಲೂ ಪ್ರದೇಶ ಕಾಂಗ್ರೆಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಲ್ಲೊಬ್ಬರು ಅದರ ಸಂಪಾದಕರಾಗಿ ಪ್ರಕಾಶಕರಾಗಿ ನೇಮಕವಾಗುತ್ತಲಿದ್ದಾರೆ. ರಾಮಕೃಷ್ಣ ಹೆಗ್ಗಡೆ, ಕೆ.ವಿ. ಶಂಕರಗೌಡ ಮತ್ತು ವೈ. ರಾಮಚಂದ್ರ ಇವರು ಕ್ರಮವಾಗಿ ಪತ್ರಿಕೆಯ ಸಂಪಾದಕರಾಗಿದ್ದಾರೆ. ಮಾಸಪತ್ರಿಕೆಯಾದರೂ ಕುಂಟುತ್ತ ಸಾಗಿದ್ದ ಇದು 1961ರಲ್ಲಿ ಮರುವರ್ಷ ನಡೆಯಲ್ಲಿದ್ದ ಚುನಾವಣೆಗಳ ಪ್ರಚಾರದ ದೃಷ್ಟಿಯಿಂದ ವಾರಪತ್ರಿಕೆಯಾಗಿ ಬದಲಾಯಿತು. ಕುಮಾರ ವೆಂಕಣ್ಣ ಇದರ ಕಾರ್ಯನಿರತ ಸಂಪಾದಕರಾದರು.

 1962ರಿಂದ ಪತ್ರಿಕೆ ಅನೇಕ ಬದಲಾವಣೆಗಳನ್ನು ಕಂಡಿದೆ. ಮೊದಲ ಬಾರಿಗೆ ಪಂಚತಂತ್ರದ ಕಥೆಗಳ ಮೂಲಕ ರಾಜಕೀಯ ಸಮಸ್ಯೆ, ಪ್ರಶ್ನೆ, ವಿವಾದಗಳಿಗೆ ಉತ್ತರ ನೀಡುವ ಲೇಖನಮಾಲೆ ಇದರಲ್ಲಿ ಆರಂಭವಾಗಿ, ಅದು ಜನಸಾಮಾನ್ಯರಿಗೆ ರಾಜಕೀಯ ವಿಚಾರ ವಿರಿಸುವಲ್ಲಿ ಮಹತ್ತ್ವದ ಪಾತ್ರ ವಹಿಸಿತು. ಹಾಗೆಯೇ ಭಾರತದ ಸ್ವಾತಂತ್ರ್ಯ ಇತಿಹಾಸದ ಪ್ರಮುಖ ಘಟನೆಗಳು, ಸ್ವಾತಂತ್ರ್ಯ ಯೋಧರ ಕಥೆಗಳು, ಕ್ರಾಂತಿಕಾರರ ಸಾಹಸಗಳು ಮತ್ತು ಸಾಮಾಜಿಕ ಲೇಖನಗಳು ಪ್ರಕಟವಾಗಿ ಇದು ದೇಶದ ಸ್ವಾತಂತ್ರ್ಯ ಹೋರಾಟ, ಸಾಧನೆ ಹಾಗೂ ಸ್ವತಂತ್ರ ಭಾರತದ ಪ್ರಗತಿಯ ಬಗ್ಗೆ ಜನತೆಗೆ ತಿಳಿಯಹೇಳುತ್ತ ಬಂದಿದೆ. ಕನ್ನಡ ನಾಡಿನಲ್ಲಿ ಪ್ರಕಟವಾಗುತ್ತಿರುವ ರಾಜಕೀಯ ವಾರಪತ್ರಿಕೆ (ಪೊಲಿಟಿಕಲ್ ವೀಕ್ಲಿ) ಇದು.       

 (ಕೆ.ಯು.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ